Wednesday, 2 March 2016

ಪಾಕ್ ಮೇಲೆ ದಾಳಿ ಮಾಡಬೇಕೆಂದು ಆಗ್ರಹಿಸುತ್ತಿರುವವರಿಗೆ ಒಂದಷ್ಟು ಕಿವಿಮಾತು

ಪಾಕ್ ಮೇಲೆ ದಾಳಿ ಮಾಡಬೇಕೆಂದು ಆಗ್ರಹಿಸುತ್ತಿರುವವರಿಗೆ ಒಂದಷ್ಟು ಕಿವಿಮಾತು


ಈಗ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ.ಮೋದಿಜೀ ಪಾಕ್ ಉಗ್ರರು ಪದೇ ಪದೇ ದಾಳಿ ಮಾಡುತ್ತಿದ್ದಾರೆ.ನೀವು ಮಾತ್ರ ಸುಮ್ಮನೇ ಕುಳಿತಿದ್ದೀರಿ.ಈ ವರ್ಷಾರಂಭದಲ್ಲೇ ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿಯಾಯಿತು. ಅದು ಮರೆಯುವ ಮೊದಲೆ ಕಾಶ್ಮೀರದ ಕುಪ್ವಾರ್’ನಲ್ಲಿ ಸೈನಿಕರ ಕಗ್ಗೊಲೆಯಾಯಿತು.ಮೊನ್ನೆ ಕಾಶ್ಮೀರದ ಪ್ಯಾಂಪೋರ್ ಮೇಲೆ ಉಗ್ರರು ದಾಳಿ ಮಾಡಿದರು.ಹೀಗಿದ್ದೂ ನಾವು ಪ್ರತಿದಾಳಿ ಮಾಡಿ ಪಾಕ್’ಗೆ ತಕ್ಕ ಪಾಠ ಕಲಿಸಬಾರದೇಕೆ? ಸೈನಿಕರ ಮೇಲಿನ ನಿಮ್ಮ ಪ್ರೀತಿ ಕೇವಲ ಭಾಷಣ ಮಾಡುವುದಕ್ಕೆ ಮಾತ್ರ ಸೀಮಿತವಾಯಿತೇ? ಆದಷ್ಟು ಬೇಗ ಪಾಕ್ ಮೇಲೆ ದಾಳಿ ಮಾಡಿ ನಮ್ಮ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿ.ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಮನೆಗೆ ಕಳಿಸುತ್ತೇವೆ ಎಂದು ಆ ಸಂದೇಶದಲ್ಲಿ ಹೇಳಲಾಗಿತ್ತು.
ಅನೇಕರಿಗೆ ಹಾಗೆ ಅನ್ನಿಸಿರಲಿಕ್ಕೂ ಸಾಕು.ಒಮ್ಮೆ ಪಾಕ್ ಮೇಲೆ ನಾವಾಗೇ ದಾಳಿ ಮಾಡಬೇಕು.ಆಮೇಲೆ ಪಾಕ್ ಉಗ್ರರು ನಮ್ಮ ಕಡೆ ತಲೆ ಹಾಕಿಯೂ ಮಲಗುವುದಿಲ್ಲ.ಈ ಬಗ್ಗೆ ರಕ್ಷಣಾ ಇಲಾಖೆ ಸುಮ್ಮನೇ ಇರುವುದು ಏಕೆ ಅಂತ ಆಲೋಚಿಸುವುದರಲ್ಲಿ ತಪ್ಪೇನೂ ಇಲ್ಲ.ಆದರೆ ಹಾಗೆ ದಾಳಿ ಮಾಡಬೇಕು ಎಂದು ಹೇಳುವುದು ರಾಷ್ಟ್ರಪ್ರೇಮದ ಭಾವೋದ್ವೇಗದಿಂದ ಭಾಷಣ ಮಾಡಿದಷ್ಟು,ಲೇಖನ ಬರೆದಷ್ಟು ಸುಲಭವಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಸ್ವಲ್ಪ ಹಿಂದಕ್ಕೆ ಹೋಗೋಣ.ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳಾಗಿತ್ತಷ್ಟೇ.ತನ್ನ ಹಳೆಯ ಚಾಳಿಯಂತೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ಥಾನ ನಮ್ಮ ನಾಲ್ಕೈದು ಗಡಿ ಭದ್ರತಾ ಪಡೆಯ ಯೋಧರನ್ನು ಕೊಂದು ಹಾಕಿತ್ತು.ಅಂದಿನ ರಕ್ಷಣಾ ಸಚಿವರಾಗಿದ್ದ ರಾಜನಾಥ್ ಸಿಂಗ್ ಗುಂಡಿನ ದಾಳಿಗೆ ಉತ್ತರವನ್ನು ಗುಂಡಿನಿಂದಲೇ ನೀಡಲು ಸೂಚಿಸಿದರು.ನಮ್ಮ ಸೈನಿಕರು ಪ್ರತಿದಾಳಿ ನಡೆಸಿದ್ದರ ಫಲವಾಗಿ ಪಾಕ್’ನ ಇಪ್ಪತ್ತಕ್ಕೂ ಹೆಚ್ಚು ಸೈನಿಕರು ಹತರಾದರು.ಸೇನಾ ನೆಲೆಗಳು ಹಾನಿಗೊಳಗಾದವು.ಗಡಿಭಾಗದಲ್ಲಿದ್ದ ಪಾಕ್ ನಾಗರಿಕರ ಕೆಲವು ಮನೆಗಳು ಜಖಂಗೊಂಡವು.ಹೀಗೇ ಮುಂದುವರೆದರೆ ತಾವು ತುಂಬಲಾರದ ನಷ್ಟ ಅನುಭವಿಸುತ್ತೇವೆ ಎಂಬುದನ್ನು ಅರಿತ ಪಾಕ್ ನೇರವಾಗಿ ವಿಶ್ವಸಂಸ್ಥೆಯ ಬಳಿ ಹೋಗಿ ಭಾರತ ನಮ್ಮ ಮೇಲೆ ಅಮಾನುಷವಾಗಿ ದಾಳಿ ನಡೆಸುತ್ತಿದೆ.ನೀವು ಮಧ್ಯಪ್ರವೇಶಿಸಿ ದಾಳಿ ನಿಲ್ಲಿಸುವಂತೆ ಹೇಳಿ ಎಂದು ವಿಶ್ವಸಂಸ್ಥೆಯನ್ನು ಅಂಗಾಲಾಚಿತು.ಅದೇ ಸಮಯದಲ್ಲಿ ಪಾಕ್ ಗೆ ತಕ್ಕ ಪಾಠ ಕಲಿಸಿದ ಭಾರತದ ಯೋಧರು ದಾಳಿ ನಿಲ್ಲಿಸಿದರು.ಭಾರತ ಪ್ರತಿದಾಳಿ ಮಾಡುತ್ತದೆ,ತಮಗೂ ಅಪಾರ ಸಾವು-ನೋವುಗಳಾಗುತ್ತವೆ ಎಂದು ಗೊತ್ತಾದ ಮೇಲೂ ಪಾಕ್ ದಾಳಿ ನಿಲ್ಲಿಸಿಲ್ಲವೇಕೆ? ಅದಾದ ಬಳಿಕ ಇಪ್ಪತ್ತಕ್ಕೂ ಹೆಚ್ಚು ಬಾರಿ ಪಾಕ್ ಕಡೆಯಿಂದ ದಾಳಿಗಳಾಗಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ.ತನಗೆ ಹಾನಿಯಾದರೂ ಪರವಾಗಿಲ್ಲ ಭಾರತ ಶಾಂತಿಯಿಂದ ಇರಬಾರದು ಎಂಬುದಷ್ಟೇ ಪಾಕ್ ಉದ್ದೇಶ.
ಪ್ರತಿ ಸಲ ಪಾಕ್ ದಾಳಿ ಮಾಡಿದಾಗಲೂ ಭಾರತ ಪ್ರತಿದಾಳಿ ಮಾಡಿದರೆ ಖಂಡಿತಾ ಯುದ್ಧದ ವಾತಾವರಣ ಸೃಷ್ಟಿಯಾಗುತ್ತದೆ.ಪಾಕ್’ಗೆ ಬೇಕಾದದ್ದೂ ಅದೇ.ಗಡಿಯಲ್ಲಿನ ಹಲವು ದಾಳಿಗಳ ಮೂಲಕ ಅದು ಯುದ್ಧಕ್ಕೆ ಭಾರತವನ್ನು Provoke ಮಾಡುತ್ತಿದೆ.ಒಂದೊಮ್ಮೆ ಯುದ್ಧ ನಡೆದೇ ಬಿಟ್ಟರೆ ಏನಾಗುತ್ತದೆ?ಮೋದಿ ಸರ್ಕಾರದ ಎಲ್ಲ ಗಮನವೂ ಯುದ್ಧದ ಮೇಲೆಯೇ ಹೋಗುತ್ತದೆ.ಎಲ್ಲ ಅಭಿವೃದ್ಧಿ ಕಾರ್ಯಗಳೂ ನೆನೆಗುದಿಗೆ ಬೀಳುತ್ತವೆ.ಅತ್ಯುತ್ತಮ ಕೆಲಸಗಳಾದ ಸ್ವಚ್ಛಭಾರತ,ಮೇಕ್ ಇನ್ ಇಂಡಿಯಾ ಮುಂತಾದವುಗಳು ನಿಂತೇ ಹೋಗುತ್ತವೆ.ಅಭಿವೃದ್ಧಿಯಲ್ಲಿ ಭಾರತ ಹತ್ತು ವರ್ಷ ಹಿಂದೆ ಹೋಗುತ್ತದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗುತ್ತದೆ.ಅಲ್ಲದೇ ರಕ್ಷಣಾ ಸಚಿವಾಲಯವೇ ನೀಡಿದ ಮಾಹಿತಿಯ ಪ್ರಕಾರ ತಕ್ಷಣ ಯುದ್ಧ ನಡೆದರೆ ಭಾರತದ ಬಳಿ ಕೇವಲ ನೂರು ದಿನಗಳಿಗೆ ಸಾಕಾಗುವಷ್ಟು ಶಸ್ತ್ರಾಸ್ತ್ರಗಳು ಮಾತ್ರ ಲಭ್ಯವಿದೆ.ಯುದ್ಧ ನೂರು ದಿನಗಳಿಗೆ ನಿಲ್ಲದೇ ಹೋದರೆ ಆಗೇನು ಮಾಡಬೇಕು?ಪಾಕಿಸ್ಥಾನ ಎಂಥ ಮೂರ್ಖ ರಾಷ್ಟ್ರವೆಂದರೆ ಗಡಿ ಭಾಗದಲ್ಲಿರುವ ತನ್ನ ಪ್ರದೇಶಗಳಿಗೂ ಹಾನಿಯಾಗುತ್ತದೆ ಎಂದು ಗೊತ್ತಿದ್ದರೂ ಅಣುಬಾಂಬ್ ಪ್ರಯೋಗಿಸಲು ಹಿಂದೆ ಮುಂದೆ ನೋಡುವುದಿಲ್ಲ.
ಭಾರತ ಪಾಕ್’ಗೆ ತಕ್ಕ ಪಾಠ ಕಲಿಸಲು ಪ್ರತಿದಾಳಿ ಮಾಡಿ ಯುದ್ಧದ ವಾತವರಣ ಸೃಷ್ಟಿಯಾದರೆ ಪ್ರಬಲ ನೆರೆ ರಾಷ್ಟ್ರವಾದ ಚೀನಾ ಖಂಡಿತವಾಗಿಯೂ ಪಾಕಿಸ್ಥಾನಕ್ಕೆ ಸಹಾಯ ಮಾಡುತ್ತದೆ.ಅಮೇರಿಕಾ ಕೂಡಾ ಭಾರತಕ್ಕೆ ನೆರವು ನೀಡುವ,ಸಂತೈಸುವ ಮಾತುಗಳನ್ನಾಡುತ್ತಲೇ ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತದೆ.ಅತ್ತ ಭಾರತದಿಂದ ಬೇರ್ಪಡಲು ಕಾದುಕೊಂಡು ಕುಳಿತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಪಾಕ್ ಜೊತೆ ಸೇರಿಕೊಂಡು ಭಾರತವನ್ನು ಹಣಿಯುತ್ತವೆ.ಭಾರತದ ಕೆಲ ಬುದ್ಧಿಜೀವಿಗಳು,ನಾಚಿಕೆ ಬಿಟ್ಟ ಕೆಲವು ಪತ್ರಕರ್ತರು ಪರೋಕ್ಷವಾಗಿ ಪಾಕಿಸ್ಥಾನಕ್ಕೆ ಸಹಾಯ ಮಾಡುತ್ತಾರೆ. ಕೆಲ ರಾಷ್ಟ್ರೀಯ ಸುದ್ದಿವಾಹಿನಿಗಳು ಯುದ್ಧವನ್ನೂ ನೇರಪ್ರಸಾರ ಮಾಡಿ ಪಾಕ್’ಗೆ ನೆರವಾಗುತ್ತವೆ.ಕಷ್ಟದಲ್ಲೂ ಪ್ರಧಾನಮಂತ್ರಿ ನೆರವಿಗೆ ನಿಲ್ಲದ ಕಾಂಗ್ರೆಸ್,ಆಮ್ ಆದ್ಮಿ ಪಾರ್ಟಿ,ಎಡಪಕ್ಷಗಳು ದೇಶದ ರಕ್ಷಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ,ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಗದ್ದಲ ಎಬ್ಬಿಸುತ್ತವೆ.ಪರಿಣಾಮ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ.ಅತ್ತ ಪಾಕಿಸ್ಥಾನದಲ್ಲಿ ಹೇಗಾದರೂ ಮಾಡಿ ನವಾಜ್ ಶರೀಫ್ ಸರ್ಕಾರವನ್ನು ಉರುಳಿಸಬೇಕೆಂದು ಒಳಸಂಚು ನಡೆಸುತ್ತಿರುವ ಸೇನೆ,ಯುದ್ಧದ ವಾತಾವರಣದ ನೆರವು ಪಡೆದು ಸರ್ಕಾರವನ್ನು ಬೀಳಿಸಿ ಸೇನಾ ಆಡಳಿತವನ್ನು ಜಾರಿಗೆ ತರುತ್ತದೆ.ಮತ್ತೊಮ್ಮೆ ಪಾಕ್ ನಲ್ಲಿ ಸೇನಾ ಆಡಳಿತ ಜಾರಿಗೆ ಬಂದರೆ ಅವರು ಪ್ರಜೆಗಳ ಹಿತ,ದೇಶದ ಆಡಳಿತ ಎಲ್ಲವನ್ನೂ ದೂರವಿಟ್ಟು ಕೇವಲ ಭಾರತದ ದಮನಕ್ಕೆ ಮುಂದಾಗುತ್ತಾರೆ.ಒಂದೊಮ್ಮೆ ಯುದ್ದದಲ್ಲಿ ಭಾರತ ಗೆದ್ದರೂ ಆಡಳಿತ ಯಂತ್ರವನ್ನು ಮತ್ತೆ ಸರಿದಾರಿಗೆ ತರಲು ಮೋದಿ ಸರ್ಕಾರಕ್ಕೆ ಕಷ್ಟವಾಗುತ್ತದೆ.ಇದರ ಲಾಭ ಪಡೆಯುವ ಇತರ ಪಕ್ಷಗಳು ಬಿಜೆಪಿ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲುಂಡರೆ ಅಚ್ಛೇ ದಿನ್ ಎಂದಿಗೂ ಬರಲಾರದು.
ಭಾರತ ಪಾಕ್ ಮೇಲೆ ಏಕಾಏಕಿ ದಾಳಿ ಮಾಡಿಬಿಡಬೇಕು ಎಂದು ಆಗ್ರಹಿಸುತ್ತಿರುವವರು ಮೇಲೆ ಹೇಳಿದ ಸೂಕ್ಷ್ಮ ಸಂಗತಿಗಳ ಬಗ್ಗೆ ಸ್ವಲ್ಪ ಆಲೋಚಿಸಬೇಕು.ದೇಶದ ಅಭಿವೃದ್ಧಿ,ಉತ್ತಮ ಆಡಳಿತ,ಕಾನೂನು ಸುವ್ಯವಸ್ಥೆ,ಸೈನಿಕರು ಚಳಿಯಿಂದ ಮತ್ತು ಆಹಾರವಿಲ್ಲದೇ ಸಾಯದಂತೆ ನೋಡಿಕೊಳ್ಳುವುದು ಮೋದಿ ಸರ್ಕಾರದ ಮೊದಲ ಆದ್ಯತೆಯೇ ಹೊರತು ಪಾಕ್ ಮೇಲೆ ಯುದ್ಧ ಮಾಡುವುದಲ್ಲ ಎಂಬುದನ್ನು ನಾವು ಅರಿಯಬೇಕು.ನಾವು ಮೋದಿ ಸರ್ಕಾರವನ್ನು ಆರಿಸಿದ್ದು ಶಾಂತಿ ಸುವ್ಯವಸ್ಥೆಯಿಂದ ಕೂಡಿದ ಅಚ್ಛೇದಿನ್ ತರುವುದಕ್ಕೇ ಹೊರತು ಯುದ್ಧದ ಮೂಲಕ ಅಘೋಷಿತ ತುರ್ತುಪರಿಸ್ಥಿತಿ ಬರುವಂತೆ ಮಾಡಲು ಅಲ್ಲ ಎಂದು ಸುಖಾ ಸುಮ್ಮನೇ ಮನೋಹರ್ ಪರಿಕ್ಕರ್ ಮತ್ತು ಮೋದಿಯನ್ನು ದೂರುತ್ತಿರುವವರು ಅರ್ಥ ಮಾಡಿಕೊಳ್ಳಬೇಕು.
ಜಾರ್ಜ್ ಫೆರ್ನಾಂಡಿಸ್ ಬಳಿಕ ಭಾರತಕ್ಕೆ ಸಿಕ್ಕಿರುವ ಮತ್ತೊಬ್ಬ ಅತ್ಯುತ್ತಮ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್.ಅವರು ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿವಾಹಿನಿಯೊಂದಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ ‘ತನ್ನ ಮೇಲೆ ದಾಳಿ ಮಾಡಿದವರ ಮೇಲೆ ಪ್ರತಿದಾಳಿ ಮಾಡುವ ದಿಟ್ಟತನವನ್ನು ಭಾರತ ತೋರುವುದು ಯಾವಾಗ’ ಎಂದು ಕೇಳಲಾದ ಪ್ರಶ್ನೆಗೆ “ನಾವು ಸರಿಯಾದ ಸಮಯದಲ್ಲಿ ಸರಿಯಾದ್ದನ್ನೇ ಮಾಡುತ್ತೇವೆ.ನಾನು ಮಾತನಾಡುವುದಿಲ್ಲ ಮಾಡಿ ತೋರಿಸುತ್ತೇನೆ” ಎಂದಿದ್ದರು.ಅದಾದ ಕೆಲ ದಿನಗಳಲ್ಲೇ ಮಣಿಪುರದಲ್ಲಿ ಸೇನಾ ನೆಲೆಯ ಮೇಲೆ ದಾಳಿ ಮಾಡಿದ ಉಗ್ರರನ್ನು ಭಾರತೀಯ ಸೇನೆ ಮಯನ್ಮಾರ್ ಗಡಿಯ ಆಚೆಗೂ ಅಟ್ಟಿಸಿಕೊಂಡು ಹೋಗಿ ಕೊಂದು ಹಾಕಿತ್ತು.ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇನ್ನು ಮೊದಲಿನ ಹಾಗೆ ಇರುವುದಿಲ್ಲ ಎಂಬ ಸಂದೇಶವನ್ನು ಪರಿಕ್ಕರ್ ಸೂಚ್ಯವಾಗಿ ರವಾನಿಸಿದ್ದರು.ಇತ್ತೀಚೆಗೆ ಇಂಡಿಯಾ ಟುಡೆ ಟಿವಿಯ ಕರಣ್ ಥಾಪರ್ ಗೆ ನೀಡಿದ ಸಂದರ್ಶನದಲ್ಲೂ ನಮ್ಮ ಮೇಲೆ ದಾಳಿ ಮಾಡಿದವರಿಗೆ ನಾವು ಖಂಡಿತಾ ಸರಿಯಾಗೇ ಪಾಠ ಕಲಿಸುತ್ತೇವೆ.ಆದರೆ ಅದು ಯಾವಾಗ ಮತ್ತು ಹೇಗೆ ಎಂಬುದನ್ನು ನೀವೇ ಕಾದು ನೋಡಿ ಎಂದೇ ಹೇಳಿದ್ದರು.
ನಮ್ಮ ಸೈನಿಕರು ಉತ್ತಮ ಶಸ್ತ್ರಾಸ್ತ್ರಗಳಿಲ್ಲದೇ,ಚಳಿ ರಕ್ಷಿಸಿಕೊಳ್ಳಲು ಸೂಕ್ತ ಬಟ್ಟೆಗಳಿಲ್ಲದೇ,ಅತ್ಯುತ್ತಮ ಆಹಾರವಿಲ್ಲದೇ ಅಸ್ವಸ್ಥರಾಗುವುದು,ಸಾವಿಗೀಡಾಗುವುದನ್ನು ನಾವು ಸಹಿಸುವುದಿಲ್ಲ.ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದೇ ನಮ್ಮ ಮೊದಲ ಆದ್ಯತೆ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.ಹಾಗಾಗಿ ಕೆಲವೇ ದಿನಗಳಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ನಮ್ಮ ಸೈನಿಕರು ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಪಡೆಯಲಿದ್ದಾರೆ.ದೇಶದ ಹಿತ ಕಾಯಬೇಕಾದರೆ ಮೊದಲು ಸೈನಿಕರು ಹಿತವಾಗಿರಬೇಕು.ಈ ನಿಟ್ಟಿನಲ್ಲಿ ನಮ್ಮ ರಕ್ಷಣಾ ಇಲಾಖೆ ಸರಿಯಾದ ಹಾದಿಯಲ್ಲೇ ಸಾಗುತ್ತಿದೆ.ನಮ್ಮ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಂತೂ ದೇಶದ ಹಿತ ಕಾಯಲು ಅನವರತ ದುಡಿಯುತ್ತಿದ್ದಾರೆ.ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿರುವ ಮಾಜಿ ಮೇಜರ್ ಜನರಲ್ ವಿ.ಕೆ.ಸಿಂಗ್ ಅವರಂಥ ಹಿರಿಯರ ಮಾರ್ಗದರ್ಶನವೂ ನಮ್ಮ ರಕ್ಷಣಾ ಇಲಾಖೆಗಿದೆ.
ಹೀಗಿರುವಾಗ ಮೋದಿ ಸರ್ಕಾರ ನಮ್ಮ ದೇಶದ ಭದ್ರತೆಯ ವಿಷಯದಲ್ಲಿ ಸರಿಯಾದ ಕಾಳಜಿ ತೋರುತ್ತಿಲ್ಲ,ಪಾಕ್ ಮೇಲೆ ತಕ್ಷಣ ದಾಳಿ ಮಾಡಬೇಕು ಎನ್ನುವವರು ಸ್ವಲ್ಪ ಪ್ರಾಯೋಗಿಕವಾಗಿ ಆಲೋಚಿಸಬೇಕು.ಒಂದು ಯಶಸ್ವಿ ರಕ್ಷಣಾ ಕಾರ್ಯಾಚರಣೆ ಅಥವಾ ಯುದ್ಧ ನಡೆಯಬೇಕೆಂದರೆ ರಕ್ಷಣಾ ಇಲಾಖೆ,ಗುಪ್ತಚರ ಇಲಾಖೆ,ಪ್ರಧಾನ ಕಾರ್ಯಾಲಯ ಮತ್ತು ರಾಷ್ಟ್ರಪತಿ ಇವರುಗಳು ಏಕಮುಖವಾಗಿ ಸಮನ್ವಯದಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ನಾವುಗಳು ದೇಶಭಕ್ತಿಯ ವೀರಾವೇಶದ ಮಾತುಗಳನ್ನಾಡಿದಂತೆ ಸೈನಿಕರು ಮನಸೋ ಇಚ್ಛೆ ಗುಂಡು ಹಾರಿಸುವಂತಿಲ್ಲ ಎಂಬುದನ್ನು ಅರಿಯಬೇಕು.
ಮೋದಿ ಸರ್ಕಾರ ಆಡಳಿತದ ವಿಷಯದಲ್ಲಿ ತೃಪ್ತಿಕರವಾಗಿ ಕೆಲಸ ಮಾಡುತ್ತಿದೆ.ಹಿಂದೆಂದೂ ಆಗದ ರೀತಿಯಲ್ಲಿ ಕೇವಲ ಟ್ವೀಟ್’ಗಳ ಮೂಲಕ ವಿದೇಶಗಳಲ್ಲೂ ಅಪಾಯಕ್ಕೆ ಸಿಲುಕುತ್ತಿರುವ ಭಾರತೀಯರ ಕೂದಲು ಕೂಡಾ ಕೊಂಕದಂತೆ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ನೋಡಿಕೊಳ್ಳುತ್ತಿದ್ದಾರೆ.ಹೀಗಿರುವಾಗ ನಮ್ಮ ಮೇಲೆ ದಾಳಿ ಮಾಡುತ್ತಿರುವ ಪಾಕ್ ಬಗ್ಗೆ ಮೋದಿ ಸರ್ಕಾರ ನಿರ್ಲಕ್ಷ ಮಾಡುತ್ತಿದೆ,ಸೈನಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ನಿರ್ಧಾರಕ್ಕೆ ಏಕಾಏಕಿ ಬಂದುಬಿಡಬಾರದು.ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಶತ್ರುಗಳಿಗೆ ನಮ್ಮ ರಕ್ಷಾಣಾ ಇಲಾಖೆ ತಕ್ಕ ಉತ್ತರ ನೀಡುವುದರಲ್ಲಿ ಸಂದೇಹವಿಲ್ಲ.ನಾವೇ ಇಷ್ಟಪಟ್ಟು ಆರಿಸಿದ ಮೋದಿ ಸರ್ಕಾರದ ಮೇಲೆ ದೇಶದ ರಕ್ಷಣೆಯ ವಿಷಯದಲ್ಲಿ ಅನುಮಾನ ಪಡುವುದು ಬೇಡ.
ಕೊನೆಯ ಮಾತು:ತಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಹಿಂದೂ ಸಂಘಟನೆಯಾಗಿದ್ದರೂ ಶ್ರೀರಾಮ ಸೇನೆಯನ್ನು ಗೋವಾದಲ್ಲಿ ನಿಷೇಧಿಸಿದ ಮನೋಹರ್ ಪರಿಕ್ಕರ್ ದೇಶದ ಭದ್ರತೆಯ ವಿಷಯದಲ್ಲಿ ಸುಮ್ಮನೇ ಕೂರುತ್ತಾರೆಯೇ?

No comments:

Post a Comment